
Read in English | हिंदी | বাংলা | தமிழ் | తెలుగు | മലയാളം | ଓଡ଼ିଆ | ગુજરાતી | मराठी | অসমীয়া
ರಾಮಕೃ಼ಷ್ಣ ಮಹಾಸಂಘವನ್ನು ಸೇರುವ ಬಗ್ಗೆ
ಹಲವು ಮಂದಿ ಯುವಕರು ಶ್ರೀರಾಮಕೃಷ್ಣರ ಮತ್ತು ಸ್ವಾಮಿ ವಿವೇಕಾನಂದರ ಜೀವನ ಮತ್ತು ಉಪದೇಶಗಳನ್ನು ಅರಿತುಕೊಂಡಾಗ, ಅವರಿಗೆ ರಾಮಕೃಷ್ಣ ಮಹಾಸಂಘವನ್ನು ಸೇರಿ ಸಂನ್ಯಾಸ ಜೀವನವನ್ನು ಸ್ವೀಕರಿಸಬೇಕೆಂಬ ಕಾತರತೆ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಇನ್ನು ಉಳಿದವರಿಗೆ ವೇದಾಂತವನ್ನು ಕುರಿತು ಸ್ಪಷ್ಟವಾದ ಭಾಷೆಯಲ್ಲಿ ಮಂಡಿಸಿದ ಭಾಷಣವನ್ನು ಕೇಳಿದಾಗ, ವಿಶೇಷವಾಗಿ ಯೂಟ್ಯೂಬ್ ಮೂಲಕ – ಪ್ರಪಂಚವನ್ನು ತ್ಯಜಿಸಬೇಕೆಂಬ ಹಂಬಲವುಂಟಾಗುವುದು. ಪ್ರಾಪಂಚಿಕ ಗಳಿಕೆಗಳ ಅಥವಾ ಸಂಬಂಧಗಳ ಬಗ್ಗೆ ಭ್ರಮನಿರಸನವುಂಟಾದಾಗಲೂ ಕೆಲವರು ಸಂನ್ಯಾಸ ಜೀವನದ ಹೊಸ್ತಿಲನ್ನು ತುಳಿಯುತ್ತಾರೆ. ಅದೇ ರೀತಿ ರಾಮಕೃಷ್ಣ ಮಹಾಸಂಘದ ಕಾರ್ಯಚಟುವಟಿಕೆಗಳಿಂದ ಪ್ರಭಾವಿತರಾಗಿ, ಅದರ ಸೇವಾಕಾರ್ಯಗಳಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬಯಸುವ ಕೆಲವು ಮಂದಿ ಸೇವಾಪರ ವ್ಯಕ್ತಿಗಳೂ ಇದ್ದಾರೆ. ಅವರಲ್ಲಿ ಇದ್ದಕ್ಕಿದ್ದಂತೆ ಸ್ಫುರಿಸುವ ತ್ಯಾಗಮನೋಭಾವಕ್ಕೆ ಕಾರಣವೇನೇ ಇರಲಿ, ರಾಮಕೃಷ್ಣ ಮಹಾಸಂಘವನ್ನು ಸೇರಿಕೊಳ್ಳುವ ಮೊದಲು ಅವರು ಜಾಗರೂಕತೆಯಿಂದ ಗಮನಿಸಬೇಕಾದ ಸಂಗತಿಗಳು ಕೆಲವು ಇವೆ. ಹೀಗೆ ಮುಂದೆ ಸಂನ್ಯಾಸಿಯಾಗಬಯಸುವವರು ಸ್ಪಷ್ಟವಾದ ತಿಳಿವಳಿಕೆಯೊಂದಿಗೆ ಒಂದು ನಿರ್ಣಯಕ್ಕೆ ಬರಲು ಸಹಾಯವಾಗುವಂತೆ, ಪ್ರಶ್ನೋತ್ತರಗಳ ಮೂಲಕ ಈ ವಿಷಯವನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ.
- ರಾಮಕೃಷ್ಣ ಮಹಾಸಂಘ ಎಂದರೇನು?
`ಮಹಾಸಂಘ’ ಎಂದರೆ, ಇಲ್ಲಿಗೆ ಸಂಬಂಧಿಸಿದಂತೆ, ಸಮಾನ ವಿಧೇಯತೆಯನ್ನು ಹೊಂದಿರುವ ಹಾಗೂ ಒಟ್ಟಿಗೆ ವಾಸಿಸುತ್ತಿರುವ ಸಾಧುಗಳ ಒಂದು ಗುಂಪು ಎಂದರ್ಥ. ರಾಮಕೃಷ್ಣ ಮಹಾಸಂಘವೆಂಬುದು ಉತ್ತಮವಾಗಿ ನಿರ್ವಚಿಸಲಾಗಿರುವ ಸಂನ್ಯಾಸಿಗಳ ಒಂದು ಒಕ್ಕೂಟವಾಗಿದೆ. ಇದರ ಮೂಲ ಶ್ರೀರಾಮಕೃಷ್ಣರು ಹಾಗೂ ಅವರ ಸಮರ್ಥ ಶಿಷ್ಯಂದಿರು, ಮುಖ್ಯವಾಗಿ ಸ್ವಾಮಿ ವಿವೇಕಾನಂದರು. ಇಲ್ಲಿ ವಿಶೇಷವಾಗಿ ಹೆಸರಿಸಬೇಕಾದುದು ಶ್ರೀಮಾತೆ ಶಾರದಾದೇವಿಯವರನ್ನು – ಅವರ ಆಧ್ಯಾತ್ಮಿಕ ಸ್ಥಾನವು ಶ್ರೀರಾಮಕೃಷ್ಣರಿಗೆ ಸಮಾನವಾದುದು; ಅವರು ರಾಮಕೃಷ್ಣ ಮಹಾಸಂಘ ಆರಂಭವಾದ ಬಳಿಕ ಮೂರು ದಶಕಗಳ ಕಾಲ ಅದರ ಆಧ್ಯಾತ್ಮಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅವರನ್ನು `ಸಂಘಜನನಿ’ ಎಂದು ಕರೆಯಲಾಗುತ್ತಿದೆ.
ರಾಮಕೃಷ್ಣ ಮಹಾಸಂಘ ಎಂದರೆ, ಎಲ್ಲ ಪ್ರಾಯೋಗಿಕ ಉದ್ದೇಶಗಳಿಗಾಗಿ – ನೋಂದಾಯಿಸಲ್ಪಟ್ಟ ಅವಳಿ ಸಂಸ್ಥೆಯಾಗಿದೆ: `ರಾಮಕೃಷ್ಣ ಮಠ’ ಮತ್ತು `ರಾಮಕೃಷ್ಣ ಮಿಷನ್’. ಇವೆರಡಕ್ಕೂ ಪ್ರಧಾನ ಕೇಂದ್ರವು ಬೇಲೂರು ಮಠದಲ್ಲಿದೆ. ಇವುಗಳ 200ಕ್ಕೂ ಹೆಚ್ಚಿನ ಶಾಖಾಕೇಂದ್ರಗಳು ಜಗತ್ತಿನ ಎಲ್ಲೆಡೆ ವ್ಯಾಪಿಸಿವೆ. ಈ ಅವಳಿ ಸಂಸ್ಥೆಗಳ ಇತಿಹಾಸವನ್ನು ಕುರಿತು ಹೆಚ್ಚು ತಿಳಿದುಕೊಳ್ಳಲು ನಮ್ಮ ವೆಬ್ಸೈಟನ್ನು ನೋಡಿ.
- ರಾಮಕೃಷ್ಣ ಮಹಾಸಂಘವನ್ನು “ಸೇರುವುದು” ಎಂದರೇನು?
ರಾಮಕೃಷ್ಣ ಮಹಾಸಂಘವನ್ನು ಸೇರುವುದು ಎಂದರೆ, ಒಬ್ಬ ವ್ಯಕ್ತಿ ತನ್ನ ಕುಟುಂಬ, ಸ್ನೇಹಿತರು, ಉದ್ಯೋಗ, ಪ್ರಾಪಂಚಿಕ ಆಸಕ್ತಿ-ಅಭಿರುಚಿ, ಸುಖ-ಸಂತೋಷ ಹಾಗೂ ಜವಾಬ್ದಾರಿ ಇವೆಲ್ಲವನ್ನೂ ತ್ಯಜಿಸಿ ಸಂನ್ಯಾಸ ಜೀವನವನ್ನು ಸ್ವೀಕರಿಸುವುದು. ಸಂಘವನ್ನು ಸೇರಿದ ನಂತರ ಅವನು ರಾಮಕೃಷ್ಣ ಆಶ್ರಮ ಅಥವಾ ಮಠದಲ್ಲಿ ವಾಸಿಸಬೇಕು, ತನ್ನ ಜೀವನವನ್ನೆಲ್ಲ ಆಧ್ಯಾತ್ಮಿಕ ಸಾಧನೆಗಾಗಿ ಮತ್ತು ನಿಃಸ್ವಾರ್ಥ ಸೇವೆಗಾಗಿ ಮೀಸಲಿಡಬೇಕು.
- ರಾಮಕೃಷ್ಣ ಮಹಾಸಂಘದಲ್ಲಿ ಸಂನ್ಯಾಸಿಯಾಗುವವರಿಗೆ ಅಗತ್ಯವಾಗಿ ಇರಬೇಕಾದ ಅರ್ಹತೆಗಳೇನು?
ಆಸಕ್ತಿಯಿರುವ ಯುವಕರು (ಗಮನಿಸಿ: ಯುವತಿಯರಲ್ಲ) ಕಡೇ ಪಕ್ಷ ಪದವಿ ವಿದ್ಯಾಭ್ಯಾಸವನ್ನು ಮಾಡಿರಬೇಕು ಹಾಗೂ 18 ರಿಂದ 28 ವಯಸ್ಸಿನ ಒಳಗಿರಬೇಕು – ಹಾಗಿದ್ದರೆ ಅವರು ರಾಮಕೃಷ್ಣ ಮಹಾಸಂಘವನ್ನು ಸೇರಬಹುದು. ಇಂಜಿನಿಯರಿಂಗ್ ಅಥವಾ ಮೆಡಿಕಲ್ ಪದವಿ ಪಡೆದಿರುವವರು ಹಾಗೂ ಸ್ನಾತಕೋತ್ತರ ಪದವಿ ಓದಿರುವವರು 30 ವರ್ಷ ಅವಧಿಯೊಳಗೆ ಸೇರಬಹುದು. ಪಾಶ್ಚಾತ್ಯ ದೇಶಗಳಿಗೆ ಸೇರಿದವರಾಗಿ ದ್ದರೆ 36 ವರ್ಷದ ಒಳಗಿರಬೇಕು. ಹೆಚ್ಚಿನ ವಿವರಗಳಿಗೆ ದಯವಿಟ್ಟು ಬೇಲೂರು ಮಠದ ಪ್ರಧಾನ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದು: <mail@rkmm.org>.
- ಸಂನ್ಯಾಸ ಜೀವನವನ್ನು ಸ್ವೀಕರಿಸಬಯಸುವ ಯುವತಿಯರಿಗೆ ಏನೇನು ಅವಕಾಶಗಳಿವೆ?
ರಾಮಕೃಷ್ಣ ಮಹಾಸಂಘವು ಪುರುಷರಿಗೆ ಮಾತ್ರ ಇರುವ ಸಂನ್ಯಾಸಿ ಸಂಘವಾಗಿದೆ. ಮಹಿಳೆಯರಿಗೆ ಇದೇ ರೀತಿಯ ಇನ್ನೊಂದು ಸಂಘವಿದೆ – ಅದೇ ಶ್ರೀ ಶಾರದಾ ಮಠ. ಈ ಸಂಸ್ಥೆಯು ರಾಮಕೃಷ್ಣ ಮಹಾಸಂಘದ ಆದರ್ಶಕ್ಕೆ ಸಮಾನವಾದ ಆದರ್ಶವನ್ನೇ ಹೊಂದಿದೆ. ಆಸಕ್ತಿಯುಳ್ಳ ಯುವತಿಯರು ಕೊಲ್ಕತ್ತದ ದಕ್ಷಿಣೇಶ್ವರದಲ್ಲಿರುವ ಶ್ರೀ ಶಾರದಾ ಮಠದ ಪ್ರಧಾನಕೇಂದ್ರವನ್ನು ನೇರವಾಗಿ ಸಂಪರ್ಕಿಸಬಹುದು. ಅದರ ಈ-ಮೇಲ್ ವಿಳಾಸ: <saradamath.office@gmail.com>.
- ನಾನು ವಿವಾಹಿತ. ರಾಮಕೃಷ್ಣ ಮಹಾಸಂಘವನ್ನು ನಾನು ಸೇರಿಕೊಳ್ಳಬಹುದೆ?
ದಯವಿಟ್ಟು ಕ್ಷಮಿಸಿ. ಅವಿವಾಹಿತರು ಮಾತ್ರವೇ ರಾಮಕೃಷ್ಣ ಮಹಾಸಂಘವನ್ನು ಸೇರಬಹುದು. ಹಿಂದೆ ಮದುವೆಯಾಗಿದ್ದು, ಈಗ ವಿಚ್ಛೇದನ ಪಡೆದಿರುವ ವ್ಯಕ್ತಿಗಳು ಕೂಡ ಅನರ್ಹರಾಗಿರುತ್ತಾರೆ.
ಆದರೆ ನೀವು ಭಕ್ತರಾಗಿ, ಅಥವಾ ಸ್ವಯಂಸೇವಕರಾಗಿ ನಮ್ಮೊಂದಿಗೆ ಸೇರಿಕೊಂಡು ಆಶ್ರಮದ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಇದಕ್ಕಾಗಿ, ನೀವು ವಾಸಿಸುತ್ತಿರುವ ಪ್ರದೇಶಕ್ಕೆ ಸಮೀಪದಲ್ಲಿರುವ ಶಾಖಾಕೇಂದ್ರದ ಅಧ್ಯಕ್ಷರನ್ನು ಸಂಪರ್ಕಿಸಿ.
- ಸರ್ವಸಂಗಪರಿತ್ಯಾಗ ಮಾಡಬಯಸುವ ವ್ಯಕ್ತಿಗೆ ಶೈಕ್ಷಣಿಕ ಅರ್ಹತೆ ಅಗತ್ಯವೆಂದು ಪರಿಗಣಿಸಿರುವುದು ಏಕೆ?
ಆಧ್ಯಾತ್ಮಿಕ ಬೆಳವಣಿಗೆಗೆ ಶೈಕ್ಷಣಿಕ ಅರ್ಹತೆ ಇರಲೇಬೇಕಾದ ಗುಣವಲ್ಲವಾದರೂ, ಈ ಕೆಳಗಿನ ಕಾರಣಗಳಿಗಾಗಿ ಇದು ಅತ್ಯಗತ್ಯವಾಗಿದೆ:
ಅ) ಸಂನ್ಯಾಸ ಜೀವನವನ್ನು ಸ್ವೀಕರಿಸುವುದು ಅತ್ಯಂತ ಮಹತ್ವದ ನಿರ್ಧಾರವಾಗಿರುತ್ತದೆ ಮತ್ತು ಅದನ್ನು ತೆಗೆದುಕೊಳ್ಳಲು ಒಂದು ಬಗೆಯ ಮಾನಸಿಕ ಪ್ರಬುದ್ಧತೆ ಅಗತ್ಯವಾಗಿದೆ. ಉಳಿದ ಎಲ್ಲಕ್ಕಿಂತಲೂ ಸಾಧಾರಣ ವಿದ್ಯಾಭ್ಯಾಸವು ಇಂಥ ಪ್ರಬುದ್ಧತೆಯನ್ನು ಹೊಂದಲು ಉಪಯುಕ್ತ ವಾಗಿದೆ.
ಆ) ರಾಮಕೃಷ್ಣ ಮಹಾಸಂಘದ ಸಂನ್ಯಾಸಿಗಳು ಹಲವು ಬಗೆಯಲ್ಲಿ ಜನರ ಸೇವೆ ಮಾಡುವುದಕ್ಕಾಗಿ ಶಾಲೆ, ಕಾಲೇಜು, ಆಸ್ಪತ್ರೆ ಹಾಗೂ ಇನ್ನಿತರ ಸಂಸ್ಥೆಗಳನ್ನು ನಡೆಸಬೇಕಾಗುತ್ತದೆ. ಅದಲ್ಲದೆ, ಅನೇಕ ರಾಷ್ಟ್ರೀಯ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾಷಣ ಮಾಡಲು ಅವರನ್ನು ಆಹ್ವಾನಿಸಲಾಗುತ್ತದೆ. ಇವುಗಳನ್ನು ಚೆನ್ನಾಗಿ ನಿರ್ವಹಿಸಲು ಉತ್ತಮ ವಿದ್ಯಾಭ್ಯಾಸವು ಸಹಾಯ ಮಾಡುತ್ತದೆ.
ಇ) ಕೆಲವು ಮಂದಿ ಯುವಕರು ಜೀವನದಲ್ಲಿ ಬೇಸತ್ತು, ತಮ್ಮ ಕೊನೆಯ ದಾರಿ ಎಂಬಂತೆ ಸಂನ್ಯಾಸ ಜೀವನವನ್ನು ಆರಿಸಿಕೊಳ್ಳುತ್ತಾರೆ. ಅವರಿಗೆ ಕೆಲವು ಅಧ್ಯಯನ, ಪರೀಕ್ಷೆಗಳ ಭಯವುಂಟಾಗಿರಬಹುದು. ಇನ್ನು ಕೆಲವರು ತಮ್ಮ ವಿದ್ಯಾಭ್ಯಾಸವನ್ನು ಸಮರ್ಪಕವಾಗಿ ಮಾಡಿಕೊಳ್ಳದೆ, ಉತ್ತಮ ಉದ್ಯೋಗವನ್ನು ಪಡೆಯುವಲ್ಲಿ ವಿಫಲರಾಗಿರಬಹುದು. ಉತ್ತಮ ವಿದ್ಯಾಭ್ಯಾಸ ಹಾಗೂ ವಯೋಮಿತಿಯನ್ನು ನಿಗದಿಗೊಳಿಸುವ ಮೂಲಕ ಇಂಥ ಯುವಕರು ಮಹಾಸಂಘಕ್ಕೆ ನುಸುಳದಂತೆ ತಡೆಯುವುದೂ ಸಾಧ್ಯವಾಗುವುದು!
- ನಾನು ಕಾಲೇಜು/ವಿಶ್ವವಿದ್ಯಾನಿಲಯದ ವಿದ್ಯಾರ್ಥಿ. ನಾನು ಈಗಲೇ ಮಹಾಸಂಘವನ್ನು ಸೇರಿಕೊಳ್ಳಬಹುದೆ?
ನೀವು ಈಗಾಗಲೇ ಕಲಿಯುತ್ತಿರುವ ಪದವಿಯನ್ನು ಮುಂದುವರಿಸಿ ಹಾಗೂ ಅದನ್ನು ಪೂರ್ಣಗೊಳಿಸಿ ಎಂದು ಒತ್ತುಕೊಟ್ಟು ಹೇಳುತ್ತಿದ್ದೇವೆ. ಅದನ್ನು ಪೂರೈಸಿದ ಕೂಡಲೇ ನೀವು ಸಂಘವನ್ನು ಸೇರಬಹುದು. ನಿಮ್ಮ ವಿದ್ಯಾಭ್ಯಾಸವು ನಿಮ್ಮ ಆಧ್ಯಾತ್ಮಿಕ ತ್ಯಾಗಕ್ಕೆ ಮೊದಲ ಬಲಿಪಶುವಾಗದಿರಲಿ!
ನಿಮ್ಮ ಅಧ್ಯಯನ ಪೂರೈಸುವವರೆಗೆ ನೀವು ನಮ್ಮ ಯಾವುದೇ ಶಾಖಾಕೇಂದ್ರದೊಂದಿಗೆ ಸಂಪರ್ಕದಲ್ಲಿರಿ ಹಾಗೂ ಬಿಡುವಿನ ವೇಳೆಯಲ್ಲಿ ಏನಾದರೂ ಸೇವಾಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
- ರಾಮಕೃಷ್ಣ ಮಹಾಸಂಘವನ್ನು ಸೇರಿಕೊಂಡ ನಂತರ ನಾನು ನನ್ನ ಕಾಲೇಜು ಅಥವಾ ಉನ್ನತ ಶಿಕ್ಷಣವನ್ನು ಮುಂದುವರಿಸಬಹುದೆ?
ಸಂಘವನ್ನು ಸೇರಬಯಸುವ ಅಭ್ಯರ್ಥಿಗಳು ಸಾಮಾನ್ಯವಾಗಿ ಸೇರುವ ಮೊದಲೇ ತಮ್ಮ ಶಿಕ್ಷಣವನ್ನು ಮುಗಿಸಿ ಬಂದಿರಬೇಕೆಂದು ನಿರೀಕ್ಷಿಸಲಾಗುತ್ತದೆ.
- ನನಗೆ ಕೆಲವೊಂದು ಆರೋಗ್ಯದ ಸಮಸ್ಯೆಗಳಿವೆ. ಅದರಿಂದ ಮಹಾಸಂಘವನ್ನು ಸೇರಲು ತೊಂದರೆಯಾಗುವುದೆ?
ಸಂಘವನ್ನು ಸೇರಲು ಉತ್ತಮ ಆರೋಗ್ಯ ಅತ್ಯಗತ್ಯ. ಕಾರಣ, ಸಂನ್ಯಾಸಿಯು ಇತರರಿಂದ ಸೇವೆ ಮಾಡಿಸಿಕೊಳ್ಳುವ ಬದಲು ತಾನೇ ಇತರರ ಸೇವೆಯಲ್ಲಿ ನಿರತರಾಗಬೇಕೆಂದು ನಿರೀಕ್ಷಿಸಲಾಗುತ್ತದೆ. ಆದಕಾರಣ, ಆಶ್ರಮ ಸೇರುವ ಸಮಯದಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ಮಾಡಿಕೊಳ್ಳಬೇಕಾಗುತ್ತದೆ. ಈ ಮೂಲಕ ಅವರ ಆರೋಗ್ಯದೃಢತೆ ಪ್ರಮಾಣಗೊಳ್ಳುತ್ತದೆ. ದೀರ್ಘಕಾಲದ ಅಥವಾ ಅತ್ಯಂತ ಕ್ಷೀಣಗೊಳಿಸುವ (ದೈಹಿಕ ಅಥವಾ ಮಾನಸಿಕ) ಕಾಯಿಲೆಗಳು ಇದ್ದವರು ಸಂಘವನ್ನು ಸೇರಲಾಗುವುದಿಲ್ಲ. ಕಾರಣ, ಅವರಿಗೆ ಸಂನ್ಯಾಸೀ ಜೀವನದ ಕಠಿಣತೆಗಳನ್ನು ಹಾಗೂ ಸಂಘದ ಕರ್ತವ್ಯಗಳನ್ನು ನಿರ್ವಹಸುವುದು ಕಷ್ಟವಾಗಬಹುದು.
- ನಾನು ಶ್ರೀರಾಮಕೃಷ್ಣರ ಅಥವಾ ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದಿಲ್ಲ. ನಾನು ರಾಮಕೃಷ್ಣ ಮಹಾಸಂಘವನ್ನು ಸೇರಬಹುದೆ?
ಈ ಕೂಡಲೇ ನೀವು ಸೇರಿಕೊಳ್ಳುವುದು ಉತ್ತಮವಲ್ಲ. ರಾಮಕೃಷ್ಣ-ವಿವೇಕಾನಂದ ಸಾಹಿತ್ಯದ ಕೆಲವು ಪ್ರಧಾನ ಪುಸ್ತಕಗಳನ್ನು ಓದಲು ಬಿಡುವು ಮಾಡಿಕೊಳ್ಳಿ.
- ನಾನು ವೇದಾಂತವನ್ನು ಆಳವಾಗಿ ಅಧ್ಯಯನ ಮಾಡಲು ಆಸಕ್ತಿ ಹೊಂದಿದ್ದೇನೆ. ಸಂಘವನ್ನು ಸೇರಿದ ಮೇಲೆ ಅದನ್ನು ಮಾಡಬಹುದೆ?
ಹೌದು, ರಾಮಕೃಷ್ಣ ಮಹಾಸಂಘದಲ್ಲಿ ಭಗವದ್ಗೀತೆ, ಉಪನಿಷತ್ತುಗಳಂತಹ ವೇದಾಂತ ಶಾಸ್ತ್ರಗ್ರಂಥಗಳನ್ನು ಅಧ್ಯಯನ ಮಾಡಲು ಸಾಕಷ್ಟು ಅವಕಾಶವಿದೆ. ಪ್ರತಿಯೊಬ್ಬ ಬ್ರಹ್ಮಚಾರಿಯೂ ಸಂಘವನ್ನು ಸೇರಿಕೊಂಡ ಮೂರು ವರ್ಷಗಳ ನಂತರ ಬೇಲೂರು ಮಠದಲ್ಲಿರುವ `ಬ್ರಹ್ಮಚಾರಿ ಪ್ರಶಿಕ್ಷಣ ಕೇಂದ್ರ’ದಲ್ಲಿ (ಸಂಕ್ಷಿಪ್ತವಾಗಿ Training Centre – TC ಎನ್ನುತ್ತಾರೆ) ಎರಡು ವರ್ಷಗಳ ಶಿಸ್ತುಬದ್ಧ ತರಬೇತಿಯನ್ನು ಪಡೆಯಬೇಕಾಗುತ್ತದೆ. ಅಲ್ಲಿ ವೇದಾಂತ ಹಾಗೂ ಇತರ ಧಾರ್ಮಿಕ ವಿಷಯಗಳನ್ನು ಕಲಿಸಲಾಗುತ್ತದೆ.
ಶ್ರೀರಾಮಕೃಷ್ಣ, ಶ್ರೀಶಾರದಾದೇವಿ, ಸ್ವಾಮಿ ವಿವೇಕಾನಂದ ಹಾಗೂ ಶ್ರೀರಾಮಕೃಷ್ಣರ ಇತರ ಸಂನ್ಯಾಸಿ ಶಿಷ್ಯಂದಿರ ಜೀವನಚರಿತ್ರೆ ಮತ್ತು ಉಪದೇಶಗಳೂ ಕೂಡ ಒಂದರ್ಥದಲ್ಲಿ ವೇದಾಂತವೇ. ಏಕೆಂದರೆ, ಅವರೂ ಕೂಡ ವೇದಾಂತದ ಸತ್ಯಗಳನ್ನೇ ತಮ್ಮ ಜೀವನದಲ್ಲಿ ಅನುಭವಿಸಿದರು ಹಾಗೂ ಆ ಸತ್ಯಗಳನ್ನೇ ಪ್ರತಿನಿಧಿಸುತ್ತಾರೆ. ಅವರ ಹೆಜ್ಜೆಯನ್ನೇ ಅನುಸರಿಸಿ ರಾಮಕೃಷ್ಣ ಮಹಾಸಂಘದ ಸಂನ್ಯಾಸಿಗಳು ಶಾಸ್ತ್ರಗಳನ್ನು ಅಭ್ಯಸಿಸಬೇಕೆಂದು ಮಾರ್ಗದರ್ಶನ ನೀಡಲಾಗುತ್ತದೆ – ಕೇವಲ ವಿದ್ವತ್ತಿಗಾಗಿ ಅಲ್ಲ; ಆದರೆ ಅವು ಹೇಳುವ ಸತ್ಯಗಳ ಬಗ್ಗೆ ಖಚಿತ ತಿಳಿವಳಿಕೆ ಹೊಂದಿ, ಅಂತಿಮವಾಗಿ ಆ ಸತ್ಯಗಳನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದಕ್ಕಾಗಿ.
- ಜನ್ಮತಃ ನಾನು ಹಿಂದುವಲ್ಲ. ನಾನು ರಾಮಕೃಷ್ಣ ಮಹಾಸಂಘವನ್ನು ಸೇರಬಹುದೆ?
ಅದೇನೂ ಸಮಸ್ಯೆಯಾಗದು. ರಾಮಕೃಷ್ಣ ಮಹಾಸಂಘವು ಎಲ್ಲ ಧರ್ಮ, ದೇಶ, ಜನಾಂಗಗಳಿಗೆ ಸೇರಿದವರಿಗೂ ಮುಕ್ತವಾಗಿದೆ. ಆದರೆ ಅವರು ಪರಿಶುದ್ಧ ತ್ಯಾಗ ಜೀವನವನ್ನು ನಡೆಸಲು ಸಿದ್ಧರಾಗಿರಬೇಕು ಹಾಗೂ ಶ್ರೀರಾಮಕೃಷ್ಣರ ಆದರ್ಶಗಳನ್ನು ಸ್ವೀಕರಿಸಲು ಸಿದ್ಧರಿರಬೇಕು. ಇನ್ನಿತರ ಆದರ್ಶಗಳೊಂದಿಗೆ, `ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ಕರೆದೊಯ್ಯುತ್ತವೆ’ ಹಾಗೂ `ಮಾನವ ಸೇವೆಯೇ ದೇವರ ಸೇವೆ’ ಎಂಬುವು ಅವರ ಪ್ರಧಾನ ಆದರ್ಶಗಳಾಗಿವೆ.
- ನಾನು ಕೃಷ್ಣನ ಭಕ್ತ (ಅಥವಾ ಶಿವ, ಕಾಳಿ, ಕ್ರಿಸ್ತ – ಹೀಗೆ ಯಾವುದೇ ದೇವತೆಯ ಭಕ್ತ). ನಾನು ಸಂಘವನ್ನು ಸೇರಬಹುದೆ?
ನಿಮಗೆ ಸ್ವಾಗತ! ಶ್ರೀರಾಮಕೃಷ್ಣರ ಮೇಲೆ ಭಕ್ತಿ, ಗೌರವಗಳಿದ್ದರೆ ಮತ್ತು ಅವರ ಉಪದೇಶಗಳಲ್ಲಿ ಸತ್ಯವಿದೆ ಎಂಬುದು ನಿಮಗೆ ಮನವರಿಕೆ ಯಾಗಿದ್ದರೆ, ನೀವು ಸಂಘವನ್ನು ಸೇರಬಹುದು.
- ರಾಮಕೃಷ್ಣ ಮಹಾಸಂಘವನ್ನು ಸೇರುವ ಮೂಲಕ ನಾನು ದೇಶಸೇವೆ ಮಾಡಬಹುದೆ? – ವಿಶೇಷವಾಗಿ ದೀನರ, ಬಡವರ ಸೇವೆ ಮಾಡಬಹುದೆ?
ಹೌದು, ನೀವು ಸಂಘವನ್ನು ಸೇರಬಹುದು – ಆದರೆ ನಿಮ್ಮ ದೃಷ್ಟಿಯಲ್ಲಿ ಸೇವೆ ಎಂಬುದನ್ನು ನೀವು ವಿಶಾಲಗೊಳಿಸಲು ಸಿದ್ಧರಿರಬೇಕು. ನಮ್ಮ ಸಂಸ್ಥೆಯು ಸಮಾಜ ಸೇವೆಯಲ್ಲಿ ನಿರತವಾದ ಇನ್ನೊಂದು NGO ಸಂಸ್ಥೆಯಲ್ಲ. ಸ್ವಾಮಿ ವಿವೇಕಾನಂದರೇ ನೀಡಿರುವ ಧ್ಯೇಯ ನಮ್ಮದು – `ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ’. ಇದರರ್ಥ, `ವ್ಯಕ್ತಿಯೊಬ್ಬನ ಆತ್ಮ ಸಾಕ್ಷಾತ್ಕಾರಕ್ಕಾಗಿ ಮತ್ತು ಜಗತ್ತಿನ ಒಳಿತಿಗಾಗಿ’ ಎಂದಾಗಿದೆ. ಈ ಸಂಸ್ಥೆಗೆ ಆಧ್ಯಾತ್ಮಿಕತೆಯೇ ತಳಹದಿ, ಮಾರ್ಗದರ್ಶಕ ಶಕ್ತಿ ಹಾಗೂ ಅಂತಿಮ ಗುರಿಯಾಗಿದೆ. ಸೇವಾಕಾರ್ಯಗಳು ಇನ್ನೊಂದು ರೂಪದ ಆಧ್ಯಾತ್ಮಿಕ ಸಾಧನೆ ಎಂದೇ ನಮ್ಮ ಸಂನ್ಯಾಸಿಗಳು ಪರಿಗಣಿಸುತ್ತಾರೆ (ಕೇವಲ ದಯಾರ್ದ್ರ ಹೃದಯ ಮತ್ತು ದೇಶಭಕ್ತಿ ಮಾತ್ರವಲ್ಲ). ಈ ಬಗೆಯ ಆಧ್ಯಾತ್ಮಿಕ ದೃಷ್ಟಿಕೋನವು ರಾಮಕೃಷ್ಣ ಮಹಾಸಂಘದಲ್ಲಿ ಮುಂದುವರಿಯಲು ಅತ್ಯಗತ್ಯವಾಗಿದೆ.
- ನಾನು ಸಂನ್ಯಾಸಿಯಾಗುವ ಬಯಕೆಯನ್ನು ಹೊಂದಿದ್ದೇನೆ. ಆದರೆ ನನ್ನ ಹೆತ್ತವರು ಅದಕ್ಕೆ ವಿರುದ್ಧವಾಗಿದ್ದಾರೆ. ನಾನೇನು ಮಾಡಲಿ?
ಸಂಘವನ್ನು ಸೇರುವುದಕ್ಕೆ ಹೆತ್ತವರ ಒಪ್ಪಿಗೆ ಇದ್ದರೆ ಅದು ಒಳ್ಳೆಯದೇ; ಆದರೆ ಅದು ಅನಿವಾರ್ಯವೆಂದು ನಾವು ಭಾವಿಸುವುದಿಲ್ಲ – ಕಾರಣ, ನೀವು ಪ್ರೌಢ ವಯಸ್ಕರು. ಕೆಲವು ಮಂದಿ ಹೆತ್ತವರು ಮಾತ್ರ ತಮ್ಮ ಮಗ ಸಂನ್ಯಾಸಿಯಾಗುವುದನ್ನು ಪ್ರೋತ್ಸಾಹಿಸುತ್ತಾರೆ. ಹೆಚ್ಚಿನ ಅಭ್ಯರ್ಥಿಗಳು ತಮ್ಮ ಹೆತ್ತವರ ವಿರೋಧವನ್ನು ಎದುರಿಸಬೇಕಾಗುತ್ತದೆ, ಕೆಲವೊಮ್ಮೆ ಅವರ ಸಂನ್ಯಾಸಿಯಾಗುವ ಬಯಕೆಯಿಂದಾಗಿ ಹೆತ್ತವರ ಶಾಪಕ್ಕೂ ತುತ್ತಾಗುತ್ತಾರೆ. ಆದರೆ, ನೀವು ಪ್ರಾಪಂಚಿಕ ಸುಖಭೋಗಗಳ ಮೇಲೆ ನಿಜವಾದ ವೈರಾಗ್ಯ ಹೊಂದಿ ಈ ಜೀವನವನ್ನು ಸ್ವೀಕರಿಸಿದ್ದೀರಿ, ಹಾಗೂ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಲ್ಲ ಎಂಬುದನ್ನು ನಿಮ್ಮ ಅಂತರಂಗದಲ್ಲಿ ನೀವು ಸ್ಪಷ್ಟವಾಗಿ ಅರಿತಿದ್ದರೆ, ನಿಮ್ಮನ್ನು ಯಾವುದೂ ತಡೆಯಲಾಗದು. ಅಂತೆಯೇ, ಬಹುಪಾಲು ಮಂದಿ ಹೆತ್ತವರು ತಮ್ಮ ಮಗ ರಾಮಕೃಷ್ಣ ಮಹಾಸಂಘವನ್ನು ಸೇರಿಕೊಂಡ ಕೆಲವು ವರ್ಷಗಳ ನಂತರ, ಅವರ ನಿರ್ಧಾರವನ್ನು ಮೆಚ್ಚಿಕೊಳ್ಳುತ್ತಾರೆ, ಹಾಗೂ ಸಂಘವನ್ನು ಸೇರಿದ್ದರಿಂದ ಹೆಮ್ಮೆಪಡುತ್ತಾರೆ.
ವಿರೋಧ, ಅಡ್ಡಿಗಳು ಎದುರಾದರೆ, ಅಭ್ಯರ್ಥಿಯು ಖಚಿತವಾಗಿ ತಿಳಿದುಕೊಳ್ಳಬೇಕು – ಸಂನ್ಯಾಸ ಎಂಬುದು ಪ್ರಾಚೀನ ಕಾಲದಿಂದಲೂ ಮುಂದುವರಿದುಕೊಂಡು ಬಂದ ಒಂದು ಸಂಪ್ರದಾಯ ಹಾಗೂ ಇದಕ್ಕೆ ಶಾಸಗಳ ಬೆಂಬಲ ಇದೆ ಎಂದು. `ಯದಹರೇವ ವಿರಜೇತ್ ತದಹರೇವ ಪ್ರವ್ರಜೇತ್’ (ಯಾವಾಗ ಪ್ರೇರಣೆ ಉಂಟಾಗುವುದೋ ಆಗಲೇ ಪ್ರಪಂಚವನ್ನು ತ್ಯಜಿಸಬೇಕು) ಎಂದು ಜಾಬಾಲೋಪನಿಷತ್ತು ಹೇಳುತ್ತದೆ.
- ಮಹಾಸಂಘವನ್ನು ಸೇರಿದ ಮೇಲೆ ನಾನು ನನ್ನ ಹೆತ್ತವರೊಂದಿಗೆ ಸಂಪರ್ಕದಿಂದಿರಬಹುದೆ?
ಆರಂಭಿಕ ದಿನಗಳಲ್ಲಿ ಬ್ರಹ್ಮಚಾರಿಯು ತನ್ನ ಹೆತ್ತವರೊಂದಿಗೆ ಮಾತನಾಡಲು, ಅವರ ಯೋಗಕ್ಷೇಮವನ್ನು ವಿಚಾರಿಸಲು ಅವಕಾಶವಿದೆ. ಆದರೆ ಸಂನ್ಯಾಸಿಯು ಮುಂದೆ ತನ್ನ ಎಲ್ಲ ಸಂಬಂಧಗಳನ್ನೂ ಪೂರ್ವಾಶ್ರಮದ ಎಲ್ಲ ಬಂಧನಗಳನ್ನೂ ಕಳಚಿಕೊಳ್ಳುವುದು ಅಗತ್ಯ. ಆದರೆ ಎಲ್ಲರಿಗೂ ಇದನ್ನು ಒಂದು ದಿನದಲ್ಲೇ ಸಾಧಿಸುವುದು ಅಸಾಧ್ಯ. ಆದ್ದರಿಂದ ಪ್ರಾಪಂಚಿಕ ಸಂಬಂಧಗಳನ್ನೂ ನಿಧಾನವಾಗಿ ಕಡಿಮೆಗೊಳಿಸಿ, ವೈರಾಗ್ಯವನ್ನು ಬೆಳೆಸಿಕೊಳ್ಳಬೇಕು.
- ನನ್ನ ಹೆಸರಿನಲ್ಲಿ ಒಂದಿಷ್ಟು ಆಸ್ತಿ, ಸೊತ್ತು ಇದೆ. ನಾನು ಸಂಘವನ್ನು ಸೇರಿದ ಮೇಲೆ ಅದರ ಗತಿ ಏನು?
ತತ್ತ್ವತಃ ಸಂನ್ಯಾಸಿಗಳು ಯಾವುದೇ ಬಗೆಯ ಸೊತ್ತನ್ನು ಸ್ವಂತಕ್ಕಾಗಿ ಹೊಂದಿರಬಾರದು. ಈ ವಿಷಯದಲ್ಲಿ ಹಿಂದೂ ಶಾಸ್ತ್ರಗಳು ಹಾಗೂ ಹಿಂದೂ ಕಾನೂನು ಸಮಾನ ಅಭಿಪ್ರಾಯವನ್ನು ಹೊಂದಿವೆ. ನಿಮ್ಮ ಹೆಸರಿನಲ್ಲಿರುವ ಯಾವುದೇ ಸ್ಥಿರ ಅಥವಾ ಚರ ಆಸ್ತಿಗಳನ್ನು ನಿಮ್ಮ ಇಷ್ಟದಂತೆ ನೀವು ವಿತರಿಸಬೇಕು – ಸಂಘವನ್ನು ಸೇರುವ ಮೊದಲೇ ಮಾಡುವುದು ಒಳ್ಳೆಯದು; ಅದು ಸಾಧ್ಯವಾಗದಿದ್ದರೆ, ಸೇರಿದ ಬಳಿಕ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೆ ಮಾಡಬೇಕು.
- ಮಹಾಸಂಘದಲ್ಲಿ ನನಗೆ ಸಂಬಳ ಬರುವುದೆ?
ನಮ್ಮ ಸಂಘದಲ್ಲಿ ಸಂನ್ಯಾಸಿಗಳಿಗೆ ಸಂಬಳ ನೀಡಲಾಗುವುದಿಲ್ಲ. ಇದು ಸಂನ್ಯಾಸದ ಆದರ್ಶಕ್ಕೆ ವಿರುದ್ಧವಾಗಿದೆ. ಸಂಬಳವನ್ನು ಪಡೆಯುವ ಯಾವುದೇ ಉದ್ಯೋಗದಂತಲ್ಲ ಸಂನ್ಯಾಸ ಜೀವನ. ಇಲ್ಲಿ ನೀವು ನಿಮ್ಮ ದೇಹ, ಮನಸ್ಸು, ಸಾಮರ್ಥ್ಯ, ನೈಪುಣ್ಯ ಎಲ್ಲವನ್ನೂ ಇಚ್ಛಾಪೂರ್ವಕವಾಗಿಯೂ ಸಂಪೂರ್ಣವಾಗಿಯೂ ಬೇರೆ ಯಾವುದನ್ನೂ ಪ್ರತಿಯಾಗಿ ಬಯಸದೆ ಸಮರ್ಪಿಸಬೇಕಾಗುವುದು.
- ನಾನು ಸಂಘವನ್ನು ಸೇರಿದ ಮೇಲೆ ನನ್ನ ವೈಯಕ್ತಿಕ ಅಗತ್ಯಗಳನ್ನು ಯಾರು ಪೂರೈಸುವರು? ನಾನು ವೃದ್ಧನಾದಾಗ ನನ್ನನ್ನು ಯಾರು ನೋಡಿಕೊಳ್ಳುವರು?
ಸಂನ್ಯಾಸ ಜೀವನವೆಂದರೆ ಎಲ್ಲದಕ್ಕೂ ಭಗವಂತನನ್ನೇ ಸಂಪೂರ್ಣವಾಗಿ ಆಶ್ರಯಿಸಬೇಕಾಗುವುದೆಂದೇ ಮೊದಲು ತಿಳಿದುಕೊಳ್ಳಬೇಕು. ಅದೇ ರೀತಿ, ಸಂಘವು ನಿಮ್ಮ ಎಲ್ಲ ಅಗತ್ಯಗಳನ್ನೂ ನೋಡಿಕೊಳ್ಳುವುದು, ನಿಮ್ಮಗೆ ಎಲ್ಲ ರೀತಿಯ ಪೋಷಣೆಯನ್ನೂ ನೀಡುವುದು. ಅದರ ಬಗ್ಗೆ ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ.
- ಸಂಘವನ್ನು ಸೇರಿದ ಮೇಲೆ ನಾನು ಯಾವ ಬಗೆಯ ಬಟ್ಟೆಬರೆಯನ್ನು ಧರಿಸಬೇಕಾಗುವುದು?
ರಾಮಕೃಷ್ಣ ಮಹಾಸಂಘದ ಸದಸ್ಯರು ಸಾಮಾನ್ಯವಾಗಿ ಕುರ್ತಾ (ಕಾಲರ್ ಇಲ್ಲದ, ಬಿಗಿಯಲ್ಲದ ಅಂಗಿ), ಧೋತಿ (ಪಂಚೆ) ಹಾಗೂ ಉತ್ತರೀಯ (ಶಾಲು) ಇವನ್ನು ಧರಿಸುತ್ತಾರೆ. ಬಟ್ಟೆಯ ಬಣ್ಣ ಬಿಳಿ (ಬ್ರಹ್ಮಚಾರಿಗಳಿಗೆ) ಅಥವಾ ಕಾವಿ (ಸಂನ್ಯಾಸಿಗಳಿಗೆ) ಅಗಿರುತ್ತದೆ.
- ನಾನು ಒಂದು ವೇಳೆ ನಾಳೆಯೇ ರಾಮಕೃಷ್ಣ ಮಹಾಸಂಘವನ್ನು ಸೇರಿಕೊಂಡರೆ, ಪೂರ್ಣ ಪ್ರಮಾಣದಲ್ಲಿ ಸಂನ್ಯಾಸಿಯಾಗಲು ಎಷ್ಟು ಸಮಯ ಬೇಕಾಗುವುದು?
ಸಾಮಾನ್ಯವಾಗಿ, ಕಡೇ ಪಕ್ಷ ಒಂಬತ್ತು ವರ್ಷ ಬೇಕಾಗುವುದು. ಈ ಅವಧಿಯು ಅಂತಿಮ ಸಂನ್ಯಾಸ ದೀಕ್ಷೆಯನ್ನು ತೆಗೆದುಕೊಳ್ಳುವ ಮೊದಲು ಅಭ್ಯರ್ಥಿಯು ತನ್ನನ್ನು ತಾನು ತಯಾರಿ ಮಾಡಿಕೊಳ್ಳುವ ಸಮಯವಾಗಿದೆ. ಕೊನೆಗೆ ಸಂನ್ಯಾಸ ದೀಕ್ಷೆಯನ್ನು ಪಡೆದಾಗ ನಿಮಗೆ “ಆನಂದ” ಎಂಬ ಹೆಸರಿನಿಂದ ಕೊನೆಯಾಗುವ, ಹಾಗೂ “ಸ್ವಾಮಿ” ಎಂಬ ಹೆಸರಿನಿಂದ ಆರಂಭಗೊಳ್ಳುವ ಹೊಸ ಹೆಸರನ್ನು ನೀಡಲಾಗುವುದು.
- ಸಂಘವನ್ನು ಸೇರಿಕೊಂಡ ನಂತರ ನಾನು ಏನು ಮಾಡಬೇಕಾಗುವುದು?
ಸಂಘವನ್ನು ಸೇರಿಕೊಂಡ ನಂತರ, ಈ ಎರಡು ಧ್ಯೇಯಗಳನ್ನು ಪಾಲಿಸಲು ನಿಮ್ಮ ಇಡೀ ಜೀವನವನ್ನು ಮುಡಿಪಾಗಿ ಇಡಬೇಕು: `ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ – ಅಂದರೆ, `ತನ್ನ ಸಾಕ್ಷಾತ್ಕಾರಕ್ಕಾಗಿ ಮತ್ತು ಜಗತ್ತಿನ ಒಳಿತಿಗಾಗಿ.’ ಹೀಗೆ ನಿಮ್ಮ ಜೀವನವಿಡೀ ನೀವು ಆಧ್ಯಾತ್ಮಿಕ ಸಾಧನೆ ಮತ್ತು ನಿಃಸ್ವಾರ್ಥ ಸೇವೆಯಲ್ಲಿ ಮುಳುಗಬೇಕಾಗುವುದು. ಆಧ್ಯಾತ್ಮಿಕ ಸಾಧನೆಯೆಂದರೆ ಜಪ, ಧ್ಯಾನ, ಪ್ರಾರ್ಥನೆ, ಪೂಜೆ, ಮಂತ್ರ ಪಠನ, ಭಜನೆ, ಪವಿತ್ರ ಗ್ರಂಥಗಳ ಓದು ಇತ್ಯಾದಿ. ಇವುಗಳಲ್ಲಿ ಪ್ರತಿದಿನ ಮಾಡುವ ಜಪ ಮತ್ತು ಧ್ಯಾನ ಬಹಳ ಮುಖ್ಯವಾದುದು. ಇವುಗಳಲ್ಲಿ ಕೆಲವನ್ನು ನಿಮ್ಮ ಪಾಡಿಗೆ ನೀವು ಮಾಡಬಹುದು, ಕೆಲವನ್ನು ಆಶ್ರಮದ ಇತರ ಸಂನ್ಯಾಸಿ ಸೋದರರೊಂದಿಗೆ ಮಾಡಬೇಕಾಗುವುದು. ಇದರೊಂದಿಗೆ ಅಷ್ಟೇ ಆಸಕ್ತಿ ಹಾಗೂ ಪ್ರಾಮಾಣಿಕತೆಗಳೊಂದಿಗೆ ನಿಷ್ಕಾಮಕರ್ಮದಲ್ಲೂ ತೊಡಗಬೇಕು – ಈ ಮೂಲಕ ನೀವು ನಮ್ಮ ಸಂಘದ ಸೇವಾಕಾರ್ಯದಲ್ಲಿ ಕೂಡ ಭಾಗವಹಿಸುವಿರಿ. ಆಶ್ರಮದ ಕೆಲಸವಾಗಿರಲಿ, ಜನಸಾಮಾನ್ಯರ ಸೇವೆಯಾಗಿರಲಿ ಅವುಗಳನ್ನು ನೀವು ಭಗವಂತನ ಪೂಜೆಯೆಂಬ ಭಾವದಿಂದ ಮಾಡಿದಾಗ, ಅದೂ ಒಂದು ಆಧ್ಯಾತ್ಮಿಕ ಸಾಧನೆಯೇ ಆಗುವುದು.
ಈ ರೀತಿ ಕೆಲವು ವರ್ಷಗಳ ಕಾಲ ಕಳೆದ ನಂತರ ನಿಮ್ಮಲ್ಲಿ ಪಾವಿತ್ರ್ಯ, ಭಕ್ತಿ, ವೈರಾಗ್ಯ, ನಿಃಸ್ವಾರ್ಥಬುದ್ಧಿ, ಸತ್ಯಸಂಧತೆ, ಬ್ರಹ್ಮಚರ್ಯ, ಹಾಗೂ ಕೊನೆಗೆ ಭಗವಂತನ ಸಾಕ್ಷಾತ್ಕಾರ ಮುಂತಾದ ಸಾಧು ಗುಣಗಳನ್ನು ಬೆಳೆಸಿಕೊಳ್ಳುವ ಹಂಬಲ ವೃದ್ಧಿಯಾಗುವುದು.
- ರಾಮಕೃಷ್ಣ ಮಹಾಸಂಘದಲ್ಲಿ ಆಧ್ಯಾತ್ಮಿಕ ಸಾಧನೆ ಮಾಡುವ ವಿಧಾನ ಯಾವುದು?
ಇಲ್ಲಿ ನಾಲ್ಕು ಯೋಗಗಳ ಸಮನ್ವಯವನ್ನು ಮಾಡಿ ಸಾಧನೆ ಮಾಡಲಾಗುವುದು. ಅವುಗಳೆಂದರೆ: ಕರ್ಮಯೋಗ, ಭಕ್ತಿಯೋಗ, ರಾಜಯೋಗ ಮತ್ತು ಜ್ಞಾನಯೋಗ. ವ್ಯಕ್ತಿತ್ವದ ಸಮಗ್ರ ಬೆಳವಣಿಗೆಗೆ ಈ ಸಮನ್ವಯವು ಸಹಕಾರಿಯಾಗುವುದು. ಯಾರಾದರೂ ಅಚಲ ನಿಷ್ಠೆಯಿಂದ ಈ ಸಮನ್ವಯ ಮಾರ್ಗವನ್ನು ಅನುಸರಿಸುತ್ತ, (ಹಿಂದಿನ ಪ್ರಶ್ನೆಗೆ ಉತ್ತರವೆಂಬಂತೆ) ಇದೇ ಜೀವನ ವಿಧಾನವೆಂದು ಭಾವಿಸಿದರೆ, ಅವರಿಗೆ ಈ ನಾಲ್ಕು ಯೋಗಗಳ ಸಮನ್ವಯವು ಅಪ್ರಯತ್ನಪೂರ್ವಕವಾಗಿ ಸಿದ್ಧಿಸುವುದು. ಸ್ವಾಮಿ ವಿವೇಕಾನಂದರೇ ರಚಿಸಿದ ರಾಮಕೃಷ್ಣ ಮಹಾಸಂಘದ ಲಾಂಛನದಲ್ಲಿ ಈ ನಾಲ್ಕು ಯೋಗಗಳ ಸಮನ್ವಯವನ್ನು ಅತ್ಯಂತ ಸುಂದರವಾಗಿ ಚಿತ್ರಿಸಲಾಗಿದೆ. ನಮ್ಮ ಲಾಂಛನವನ್ನು ಇಲ್ಲಿ ವಿವರಿಸಲಾಗಿದೆ.
- ಸಾಧಾರಣ ಅರ್ಥದಲ್ಲಿ ಬ್ರಹ್ಮಚರ್ಯ ಜೀವನ ಎಂದರೇನು ಎಂದು ನಾನು ತಿಳಿಯಬಯಸುತ್ತೇನೆ. ಇದಕ್ಕಾಗಿ ಮಾರ್ಗದರ್ಶಕ ಗ್ರಂಥಗಳಿವೆಯೆ?
ಬ್ರಹ್ಮಚರ್ಯವನ್ನು ಕುರಿತ ಸ್ವಾಮಿ ವಿವೇಕಾನಂದರ ಉಪದೇಶಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದ್ದು, ಅದನ್ನು ಇಲ್ಲಿ ನೋಡಬಹದು.
ಅದಲ್ಲದೆ, ಈ ಕೆಳಗೆ ನೀಡಿರುವ ಪುಸ್ತಕಗಳಿಂದ ಕೂಡ ಅನೇಕ ಉಪಯುಕ್ತ ಸಲಹೆಗಳನ್ನು ಪಡೆಯಬಹುದು:
Chapter on Strength of Brahmacharya in Youth! Arsie Awake and Know Your Strength : by Swami Srikanthananda.
Chapter on Brahmacharya in Spiritual Practice: By Swami Ashokananda.
- ರಾಮಕೃಷ್ಣ ಮಹಾಸಂಘವನ್ನು ಸೇರಿಕೊಂಡ ಮೇಲೆ ನನಗೆ ಸಹಾಯ ಮಾಡಬಲ್ಲ ಆಧ್ಯಾತ್ಮಿಕ ಗುರುಗಳು ಲಭಿಸುವರೆ?
ಹೌದು, ನೀವು ಅವರನ್ನು ಸಮೀಪಿಸಿದರೆ ಹಿರಿಯ ಸಂನ್ಯಾಸಿಗಳು ನಿಮಗೆ ಸಂನ್ಯಾಸ ಜೀವನದ ಪ್ರತಿಯೊಂದು ವಿಷಯದಲ್ಲೂ ಮಾರ್ಗದರ್ಶನ ನೀಡುವರು. ನೀವು ಸರಿಯಾದ ಮಾರ್ಗದಲ್ಲಿ ಮುನ್ನಡೆಯುತ್ತಿರುವರೇ ಎಂದು ಅವರು ಗಮನಿಸುತ್ತಲೂ ಇರುತ್ತಾರೆ.
- ಇಲ್ಲಿಯವರೆಗೆ ನಾನು ಮಂತ್ರದೀಕ್ಷೆ ಪಡೆದಿಲ್ಲ. ನಾನೇನು ಮಾಡಬೇಕು?
ಗುರುವು ಸಾಧಕನಿಗೆ ಮಂತ್ರವನ್ನು (ಭಗವಂತನ ಪವಿತ್ರ ನಾಮ) ನೀಡುವ ಅತ್ಯಂತ ಮುಖ್ಯವಾದ ವಿಧಿಯೇ ಮಂತ್ರದೀಕ್ಷೆ. ಮಂತ್ರವನ್ನು ಹೇಗೆ ಜಪಿಸಬೇಕು ಮತ್ತು ಧ್ಯಾನವನ್ನು (ಉಪಾಸನೆ) ಹೇಗೆ ಮಾಡಬೇಕು ಎಂಬುದನ್ನೂ ಗುರು ಸಾಧಕನಿಗೆ ತಿಳಿಸಿಕೊಡುತ್ತಾನೆ. ನಮ್ಮ ಸಂಘದಲ್ಲಿ ಪರಮಾಧ್ಯಕ್ಷರು ಮತ್ತು ಉಪಾಧ್ಯಕ್ಷರು ಮಾತ್ರವೇ ಮಂತ್ರದೀಕ್ಷೆ ನೀಡುತ್ತಾರೆ. ಆಶ್ರಮ ಸೇರುವಾಗ ನೀವು ಇನ್ನೂ ದೀಕ್ಷೆ ಪಡೆಯದಿದ್ದರೆ, ಸೇರಿದ ನಂತರ ಕೆಲವು ಸಮಯದಲ್ಲಿಯೇ ದೀಕ್ಷೆ ಪಡೆಯಲು ವ್ಯವಸ್ಥೆ ಮಾಡಲಾಗುವುದು.
- ರಾಮಕೃಷ್ಣ ಮಹಾಸಂಘದ ಯಾವುದೇ ಕೇಂದ್ರದಲ್ಲಿ ನಾನು ಸೇರಿಕೊಳ್ಳಬಹುದೆ?
ಕೆಲವು ಕೇಂದ್ರಗಳನ್ನು ಬಿಟ್ಟರೆ, ಸಂಘದ ಎಲ್ಲಾ ಕೇಂದ್ರಗಳಲ್ಲೂ – ವಿದೇಶಗಳಲ್ಲಿರುವ ಕೇಂದ್ರಗಳೂ ಸೇರಿದಂತೆ, ಬ್ರಹ್ಮಚಾರಿಗಳನ್ನು ಸೇರಿಸಿಕೊಳ್ಳುತ್ತಾರೆ.
ಬೇಲೂರು ಮಠದಲ್ಲೂ ನೀವು ಸೇರಿಕೊಳ್ಳಬಹುದು. ಅಲ್ಲಿ ಹೊಸದಾಗಿ ಸೇರಿಕೊಳ್ಳುವವರಿಗಾಗಿ ʻಪೂರ್ವ-ಪ್ರಶಿಕ್ಷಣ ತರಬೇತಿ ಕೇಂದ್ರʼವಿದೆ. (Pre-Probationers’ Training Centre – PPTC).
ಆದರೆ, ಹಿಂದೆಯೇ ತಿಳಿಸಿರುವಂತೆ, ಯಾವ ಕೇಂದ್ರದಲ್ಲಿ ಸೇರಿಕೊಂಡರೂ, ಎರಡು ವರ್ಷಗಳ ಕಾಲ TC ಯಲ್ಲಿ ಕಳೆಯುವುದಕ್ಕಾಗಿ ಬೇಲೂರು ಮಠದಲ್ಲಿ ವಾಸ ಮಾಡುವ ಅವಕಾಶ ನಿಮಗೆ ಲಭಿಸುವುದು.
- ಬೇಲೂರು ಮಠದಲ್ಲಿ ಸೇರಿಕೊಳ್ಳುವುದರ ವಿಶೇಷತೆ ಏನಾದರೂ ಇದೆಯೆ?
ಬೇಲೂರು ಮಠವು ರಾಮಕೃಷ್ಣ ಮಹಾಸಂಘದ ಹೃದಯಭಾಗವಾಗಿದೆ. ಅಲ್ಲಿ ಮುಖ್ಯವಾದ ಮಠವು ನೆಲೆಸಿದೆ. ಸ್ವಾಮಿ ವಿವೇಕಾನಂದರು ತಮ್ಮ ಸಹೋದರ ಸಂನ್ಯಾಸಿಗಳೊಂದಿಗೆ ವಾಸವಾಗಿದ್ದುದೂ ಇಲ್ಲೇ. ರಾಮಕೃಷ್ಣ ಮಹಾಸಂಘದ ಪ್ರಧಾನ ಕೇಂದ್ರ (Headquarters) ಕೂಡ ಇಲ್ಲೇ ಇದೆ. ಪವಿತ್ರ ಸ್ಮೃತಿಗಳಿಂದ ಈ ತಾಣವು ಅನುರಣಿಸುತ್ತಿರುವುದರಿಂದ, ಅನೇಕರು ತಮ್ಮ ಸಂನ್ಯಾಸ ಜೀವನವನ್ನು ಇಲ್ಲಿಂದಲೇ ಆರಂಭಿಸಲು ಬಯಸುತ್ತಾರೆ. PPTC ಯಲ್ಲಿ ಹೊಸದಾಗಿ ಸೇರಿಕೊಂಡ ಬ್ರಹ್ಮಚಾರಿಗಳು 6 ತಿಂಗಳು ಅಥವಾ 12 ತಿಂಗಳನ್ನುಇಲ್ಲಿ ಕಳೆದ ನಂತರ, ಅವರನ್ನು ವಿವಿಧ ಶಾಖಾಕೇಂದ್ರಗಳಿಗೆ ಕಳುಹಿಸಿಕೊಡಲಾಗುವುದು.
- ನಮ್ಮ ಊರಿಗೆ ಸಮೀಪದಲ್ಲೇ ರಾಮಕೃಷ್ಣ ಆಶ್ರಮವಿದೆ. ಅಲ್ಲಿ ನಾನು ಸೇರಿಕೊಳ್ಳಬಹುದೆ?
`ಶ್ರೀ ರಾಮಕೃಷ್ಣ’ ಅಥವಾ `ಸ್ವಾಮಿ ವಿವೇಕಾನಂದ’ ಎಂಬ ಹೆಸರನ್ನು ಹೊಂದಿರುವ ಆಶ್ರಮಗಳೆಲ್ಲವೂ ನಮ್ಮ ಸಂಘದ ಶಾಖಾಕೇಂದ್ರಗಳಲ್ಲ. ಆದ್ದರಿಂದ ನೀವು ಹೇಳುವ ಆಶ್ರಮವು ನಮ್ಮ ಸಂಘಕ್ಕೆ ಸೇರಿದುದೇ ಅಲ್ಲವೇ ಎಂಬುದನ್ನು ಪರೀಕ್ಷಿಸಿ. ನಮ್ಮ ಶಾಖಾಕೇಂದ್ರಗಳ ಪಟ್ಟಿಯನ್ನು ನಮ್ಮ ವೆಬ್ಸೈಟಿನಿಂದ ಪಡೆದು ಕೊಳ್ಳಬಹುದು: <belurmath.org>.
- ನನಗೆ ನಿಮ್ಮ ಒಂದು ಕೇಂದ್ರ ಇಷ್ಟವಾಯಿತು. ಅಲ್ಲಿ ನಾನು ಸಂನ್ಯಾಸಿಯಾಗಿ ನನ್ನ ಜೀವಿತವನ್ನೆಲ್ಲ ಕಳೆಯಬಹುದೆ?
ನೀವು ಆ ಕೇಂದ್ರದಲ್ಲಿ ಸೇರಿಕೊಳ್ಳಬಹುದು, ಹಾಗೂ ಅಲ್ಲಿ ಹೆಚ್ಚೆಂದರೆ ಮೂರು ವರ್ಷಗಳ ಕಾಲ ಮುಂದುವರಿಯಬಹುದು. ಅನಂತರ ಬೇಲೂರು ಮಠ (ಪ್ರಧಾನ ಕೇಂದ್ರ)ದಲ್ಲಿರುವ ಹಿರಿಯ ಸಂನ್ಯಾಸಿಗಳು ನಿಮ್ಮನ್ನು ಯಾವುದೇ ಶಾಖಾಕೇಂದ್ರಕ್ಕೆ ವರ್ಗಾಯಿಸಬಹುದು.
ಒಂದೇ ಕೇಂದ್ರದಲ್ಲಿ ಜೀವಿತವನ್ನೆಲ್ಲ ಕಳೆಯುವ ಬಯಕೆಯನ್ನು ಹೊಂದಿರುವುದು ಸಂನ್ಯಾಸದ ಆದರ್ಶಕ್ಕೆ ವಿರುದ್ಧವಾಗಿದೆ. ನಿಮ್ಮ ಆಯ್ಕೆಯ ಯಾವುದೇ ಶಾಖಾಕೇಂದ್ರದಲ್ಲಿ ನೀವು ಸೇರಿಕೊಳ್ಳಬಹುದು, ಅಲ್ಲಿ ಸುಮಾರು 3 ವರ್ಷಗಳ ಕಾಲ ಮುಂದುವರಿಯಬಹುದು; ಅನಂತರ ಬೇಲೂರು ಮಠದಲ್ಲಿರುವ ಹಿರಿಯ ಸಂನ್ಯಾಸಿಗಳು ನಿಮ್ಮನ್ನು ಯಾವ ಶಾಖಾಕೇಂದ್ರಕ್ಕೆ ಕಳುಹಿಸಲು ನಿರ್ಧರಿಸುವರೋ ಅಲ್ಲಿಗೆ ವರ್ಗವಾಗಿ ಹೋಗಲು ನೀವು ಸಿದ್ಧರಿರಬೇಕು.
- ನನಗೆ ವಿದೇಶಗಳಲ್ಲಿ ಪ್ರವಚನ ನೀಡಲು ಅವಕಾಶ ಸಿಗುವುದೆ?
ನಿಮಗೆ ಅವಕಾಶ ಸಿಗಬಹುದು, ಸಿಗದೆಯೂ ಇರಬಹುದು. ಪ್ರಧಾನ ಕೇಂದ್ರದಲ್ಲಿರುವ ಅಧಿಕೃತರು ಯಾರನ್ನು ವಿದೇಶದಲ್ಲಿರುವ ಕೇಂದ್ರಗಳಿಗೆ ಕಳುಹಿಸಬೇಕೆಂದು ತೀರ್ಮಾನಿಸುತ್ತಾರೆ. ಹಲವಾರು ಸಂಗತಿಗಳನ್ನು ಪರಿಗಣಿಸಿ ಅವರು ಹಾಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಭಗವಂತನಲ್ಲಿ ಶರಣಾಗತಿಯ ಭಾವವನ್ನು ಹೊಂದಿ ನಿಮ್ಮ ಪ್ರಬಲವಾದ ಇಷ್ಟ ಅಥವಾ ಇಷ್ಟವಿಲ್ಲದಿರುವಿಕೆ ಎರಡನ್ನೂ ದೂರಗೊಳಿಸಿದ ನಂತರ ನೀವು ಸಂಘವನ್ನು ಸೇರಿಕೊಂಡರೆ ಒಳ್ಳೆಯದು.
- ಸಾಧಾರಣವಾಗಿ ಸಂನ್ಯಾಸ ಜೀವನದ ಬಗ್ಗೆ , ಹಾಗೂ ವಿಶೇಷವಾಗಿ ರಾಮಕೃಷ್ಣ ಮಹಾಸಂಘದಲ್ಲಿ ಸಂನ್ಯಾಸ ಜೀವನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಯಸುತ್ತೇನೆ. ಹೆಚ್ಚಿನ ಓದಿಗೆ ಯಾವುದಾದರೂ ಇತರ ಪುಸ್ತಕಗಳನ್ನು ಹೆಸರಿಸುವಿರಾ?
ಈ ಹಿಂದೆ 10ನೇ ಸಂಖ್ಯೆಯ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ತಿಳಿಸಲಾದ ಪುಸ್ತಕಗಳೇ ಬೇಕಾದಷ್ಟು. ಅದರೊಂದಿಗೆ, ಈ ಎರಡು ಪುಸ್ತಕಗಳನ್ನೂ ನೋಡಬಹುದು:
The Glory of Monastic Life : By Swami Bhajanananda
Monasticism – Ideal and Traditions : A Vedanta Kesari Presentation
- ಒಂದು ವೇಳೆ ನನಗೆ ಸಂಘದಲ್ಲಿ ಮುಂದುವರಿಯಲು ಸಾಧ್ಯವಾಗದೆ ಹೋದರೆ, ನಾನು ಸಂಘವನ್ನು ತ್ಯಜಿಸಿ ಹೊರಟು ಹೋಗಬಹುದೆ?
ಹೌದು. ನಿಮ್ಮ ಸಂನ್ಯಾಸ ಜೀವನದ ಯಾವುದೇ ಹಂತದಲ್ಲಿ ನೀವು ಮಹಾಸಂಘವನ್ನು ತ್ಯಜಿಸಬಹುದು. ಎಲ್ಲರೂ ಸ್ವಂತ ಇಚ್ಛೆಯಿಂದಲೇ ಇಲ್ಲಿಗೆ ಬಂದಿರುತ್ತಾರೆ, ಅದೇ ರೀತಿ ಅವರ ಇಚ್ಛೆಯಂತೆಯೇ ಹೊರಟುಹೋಗಬಹುದು. ಯಾರಾದರೂ ಹಾಗೆ ಹೊರಟುಹೋದರೆ, ಅದರಿಂದ ನಮಗಾಗಲಿ ನಿಮಗಾಗಲಿ ಯಾವುದೇ ರೀತಿಯ ಕಾನೂನಿನ ಅಥವಾ ಆರ್ಥಿಕ ತೊಂದರೆ ಉಂಟಾಗದು. ಸಂಘವನ್ನು ತೊರೆದ ಮಾತ್ರಕ್ಕೆ ನಿಮ್ಮ ಆಧ್ಯಾತ್ಮಿಕ ಜೀವನ ಮುಗಿದೇ ಹೋಯಿತು ಎಂದರ್ಥವಲ್ಲ. ನೀವು ಎಲ್ಲಿದ್ದರೂ ಅದನ್ನು ಮುಂದುವರಿಸಬಹುದು.
- ಸರಿ. ನನ್ನ ಎಲ್ಲ ಪ್ರಶ್ನೆಗಳಿಗೂ ಉತ್ತರ ಲಭಿಸಿವೆ. ಆದರೂ ನನಗೆ ರಾಮಕೃಷ್ಣ ಮಹಾಸಂಘವನ್ನು ಸೇರಲೇ ಅಥವಾ ಎಲ್ಲರಂತೆ ಕೌಟುಂಬಿಕ ಜೀವನ ನಡೆಸಲೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದಯವಿಟ್ಟು ನನಗೆ ಸಹಾಯ ಮಾಡುವಿರಾ?
ಈ ವಿಷಯದಲ್ಲಿ ನೀವು ಮಾತ್ರವೇ ನಿರ್ಧರಿಸಬಲ್ಲಿರಿ. ನಿಮ್ಮ ನಿಜವಾದ ಆಸಕ್ತಿ ಎಲ್ಲಿದೆ ಎಂಬುದನ್ನು ಅರಿತುಕೊಳ್ಳಲು ನಿಮ್ಮ ಮನಸ್ಸನ್ನೇ ಜಾಗರೂಕತೆಯಿಂದ ತಿಳಿದುಕೊಳ್ಳಿ. ನಿಮ್ಮ ಮನಸ್ಸನ್ನು ದೃಢವಾಗಿ ಮತ್ತು ಶಕ್ತವನ್ನಾಗಿ ಮಾಡಲು ಭಗವಂತನನ್ನು ಪ್ರಾಮಾಣಿಕವಾಗಿ ಪ್ರಾರ್ಥಿಸಿ. ಅಂತೆಯೇ ನೀವು ಯಾರಾದರೂ ಹಿರಿಯರನ್ನು ಭೇಟಿಯಾಗಿ, ಈ ವಿಷಯದಲ್ಲಿ ಯೋಗ್ಯ ಸಲಹೆಯನ್ನು ಪಡೆದುಕೊಳ್ಳಬಹುದು. ಆದರೆ, ಅಂತಿಮ ನಿರ್ಧಾರವು ನಿಮ್ಮ ಒಳಗಿನಿಂದಲೇ ಬರಬೇಕು.